1899-1947. ಅಸ್ಸಾಮಿನ ಒಬ್ಬ ಸ್ವಾತಂತ್ರ್ಯ ಹೋರಾಟಗಾರ. 1899 ಫೆಬ್ರುವರಿ 17ರಂದು ಸಿಲ್ಚಾರಿನಲ್ಲಿ ಜನಿಸಿದರು. ತಂದೆ ಕಾಮಿನೀ ಕುಮಾರ ಚಂದಾ ಯಶಸ್ವೀ ವಕೀಲ, ಉದಾರವಾದಿ. ಅರುಣಕುಮಾರ ಚಂದಾ ಸಿಲ್ಚಾರ್, ಸಿಲ್ಹೆಟ್ ಮತ್ತು ಕೋಲ್ಕತ್ತದಲ್ಲೂ ಅನಂತರ ಇಂಗ್ಲೆಂಡಿನಲ್ಲೂ ವಿದ್ಯಾಭ್ಯಾಸ ಮಾಡಿದರು. ಭಾರತಕ್ಕೆ ಹಿಂದಿರುಗಿದ ಮೇಲೆ 1930-31ರಲ್ಲಿ ಸಿಂಗಪುರದಲ್ಲಿ ವಕೀಲವೃತ್ತಿ ನಡೆಸಿದರು. ಆದರೆ ತಂದೆಯ ಅನಾರೋಗ್ಯದ ಕಾರಣ ಅವರು ಸಿಲ್ಚಾರಿಗೆ ಹಿಂದಿರುಗಿ ಅಲ್ಲೇ ವಕೀಲವೃತ್ತಿಯನ್ನು ಮುಂದುವರಿಸಿದರು. ಜೊತೆಗೆ ರಾಜಕೀಯ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ, ಸೇವಾನಿರತರಾದರು. 

ಕಾಚಾರ್ ಮತ್ತು ಸಿಲ್ಹೆಟ್ ಜಿಲ್ಲೆಗಳನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡ ಚಂದಾ ಅವರು ಅಲ್ಲಿಯ ರಾಜಕೀಯದಲ್ಲಿ ಪ್ರ,ಮುಖರಾದರು. ಅವರಿಗೆ ರಾಜಕೀಯ ಪ್ರಜ್ಞೆ ಪ್ರಾಪ್ತವಾದದ್ದು ಸ್ವಾತಂತ್ಯ್ರ ಹೋರಾಟಗಾರರಾಗಿದ್ದ ಅವರ ತಂದೆಯಿಂದ. ಚಿತ್ತರಂಜನ ದಾಸರಿಂದಲೂ ಅವರು ತುಂಬಾ ಪ್ರಭಾವಿತರಾಗಿದ್ದರು. ಇಂಗ್ಲೆಂಡಿನಲ್ಲಿದ್ದಾಗ ಅಲ್ಲಿಯ ಲೇಬರ್ ಪಕ್ಷದೊಡನೆ ಸಂಪರ್ಕ ಹೊಂದಿದ್ದರಲ್ಲದೆ ಅದರ ಚುನಾವಣಾ ಪ್ರಚಾರ ಸಭೆಗಳಲ್ಲಿ ಇವರೂ ಭಾಷಣ ಮಾಡುತ್ತಿದ್ದರು. 1935ರಲ್ಲಿ ಇವರು ಸಿಲ್ಚಾರಿನಲ್ಲಿ ಗುರುಚರಣ ಕಾಲೇಜನ್ನು ಸ್ಥಾಪಿಸಿ ಕೆಲವು ಕಾಲ ಗೌರವ ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿದರು. ಕಾರ್ಮಿಕ ಕ್ಷೇತ್ರದಲ್ಲಿ ಆಸಕ್ತಿ ವಹಿಸಿದ ಇವರು, ಕಾಚಾರ್ ಜಿಲ್ಲೆಯ ಅಂಚೆ ಮತ್ತು ರೈಲ್ವೆ ಅಂಚೆ ಸೇವಾಸಂಘದ ಅಧ್ಯಕ್ಷರಾಗಿದ್ದರು. ಚಹ ತೋಟದ ಕಾರ್ಮಿಕರ ಮತ್ತು ಅಸ್ಸಾಂ ತೈಲ ಕಂಪನಿಯ ಕಾರ್ಮಿಕರ ಸಂಘಗಳನ್ನು ಚೇತನಗೊಳಿಸಿದ ಅವರು ಪ್ರಥಮ ಪ್ರಾಂತೀಯ ಕಾರ್ಮಿಕ ಸಂಘ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. 

1937ರಿಂದ ಕೊನೆಯುಸಿರು ಎಳೆಯುವವರೆಗೆ ಕಾಚಾರ್ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದ ಇವರು 1937ರಲ್ಲಿ ಅಸ್ಸಾಂ ಪ್ರಾಂತ್ಯದ ವಿಧಾನಸಭೆಗೆ ಚುನಾಯಿತರಾಗಿ, ಅಲ್ಲಿಯ ಕಾಂಗ್ರೆಸ್ ವಿಧಾನ ಸಭಾಪಕ್ಷದ ಉಪನಾಯಕರಾಗಿ ಆಯ್ಕೆ ಹೊಂದಿದ್ದರು. ಸಿಲ್ಚಾರಿನ ಸಪ್ತಕ್ ಎಂಬ ಬಂಗಾಲೀ ವಾರಪತ್ರಿಕೆಯನ್ನು ಇವರು ನಿರ್ದೇಶಿಸುತ್ತಿದ್ದರಲ್ಲದೆ ಅದಕ್ಕೆ ಲೇಖನಗಳನ್ನೂ ಬರೆಯುತ್ತಿದ್ದರು. 1941 ರಲ್ಲಿ ಬ್ರಿಟಿಷರ ಯುದ್ಧ ಪ್ರಯತ್ನದ ವಿರುದ್ಧವಾಗಿ ಇವರು ಸತ್ಯಾಗ್ರಹ ಮಾಡಿ ಒಂದು ವರ್ಷದ ಕಾರಾಗೃಹ ವಾಸದ ಶಿಕ್ಷೆಗೆ ಗುರಿಯಾಗಿದ್ದರು. 1942ರಲ್ಲಿ ಸರ್ಕಾರ ಇವರನ್ನು ಮತ್ತೆ ಬಂಧಿಸಿತ್ತು. ಇವರು ಬಿಡುಗಡೆಯಾದ ಮೇಲೂ 1945ರ ಮಧ್ಯಭಾಗದವರೆಗೂ ಅಸ್ಸಾಂ ಪ್ರಾಂತ್ಯಕ್ಕೆ ಪ್ರವೇಶಿಸದಂತೆ ಸರ್ಕಾರ ಇವರಿಗೆ ಪ್ರತಿಬಂಧಕಾಜ್ಞೆ ವಿಧಿಸಿತ್ತು. ಭಾರತದ ವಿಧಾನಸಭೆಯ ಸದಸ್ಯರಾಗಿ ಅವಿರೋಧವಾಗಿ ಚುನಾಯಿತರಾಗಿದ್ದ ಇವರು ದೀರ್ಘಕಾಲ ವ್ಯಾಧಿಯನ್ನನುಭವಿಸಿ 1947ರ ಏಪ್ರಿಲ್ 26ರಂದು ಕೋಲ್ಕತ್ತದಲ್ಲಿ  ನಿಧನಹೊಂದಿದರು.	(ಎಂ.ಯು.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ